ಬ್ಯಾಂಟಿಂಗ್
ಆರ್ಟಿಯೊಡ್ಯಾಕ್ಟಿಲ ಗಣದ ಬೋವಿಡೀ ಕುಟುಂಬಕ್ಕೆ ಸೇರಿದ ಕಾಡೆತ್ತು. ಕಾಟಿಯ ಹತ್ತಿರ ಸಂಬಂಧಿಯಾದ ಇದು ನೋಡಲು ಹೆಚ್ಚುಕಡಿಮೆ ಹಾಗೆಯೇ ಇದೆಯಾದರೂ ಗಾತ್ರದಲ್ಲಿ ಕಾಟಗಿಂತ ಚಿಕ್ಕದು. ಇದರ ಸರಾಸರಿ ಎತ್ತರ 170ಸೆಂಮೀ ತೂಕ ಸುಮಾರು 800 ಕೆಜಿ. ಇದರ ವೈಜ್ಞಾನಿಕ ಹೆಸರು ಬಾಸ್ ಬ್ಯಾಂಟಿಂಗ್. 
ಬರ್ಮ, ಥಾಯ್ಲೆಂಡ್. ಮಲಯ ಪರ್ಯಾಯ ದ್ವೀಪ. ಬೋರ್ನಿಯೊ. ಜಾವ ಹಾಗೂ ಭಾರತದ ಮಣಿಪುರ ರಾಜ್ಯಗಳಲ್ಲಿ ಕಾಣದೊರೆಯುತ್ತದೆ.

	ಕಾಟಿಯ ಕಾಲುಗಳಿಗಿಂತ ಕೊಂಚ ಉದ್ದವಾದ ಕಾಲುಗಳು, ಮಟ್ಟಸವಾದ ಬೆನ್ನು, ಚಪ್ಪಟೆಯಾದ ಹಣೆ ಮುಂತಾದ ಲಕ್ಷಣಗಳಿಂದ ಇದನ್ನು ಗುರುತಿಸಬಹುದು. ಮೈಬಣ್ಣ ಕಂದು ಮಿಶ್ರಿತ ಬೂದು. ಮುಸುಡು ಹಾಗೂ ಕಾಲುಗಳ ಕೆಳಭಾಗ ಮಾಸಲು ಬಿಳಿ ಬಣ್ಣದವಾಗಿರುವುವು.

	ಬ್ಯಾಂಟಿಂಗ್ ವಾಸಿಸುವುದು ಪರ್ಣಪಾತಿ ಇಲ್ಲವೆ ನಿತ್ಯಹಸುರಿನ ಮರಗಳಿರುವ ಮಟ್ಟಸ ಕಾಡುಗಳಲ್ಲಿ. ಕಾಟಿಗಳಂತೆಯೇ ಮುಂಜಾವಿನ ಮಬ್ಬು ಬೆಳಕಿನಲ್ಲಿ ಒಂದು ಸಲ ಸಂಜೆಯ ನಸುಗತ್ತಲಲ್ಲಿ ಒಂದು ಸಲ ಹೀಗೆ ದಿನಕ್ಕೆ ಎರಡು ಬಾರಿ ಮೇಯುತ್ತಿದ್ದು ಹಗಲಿನಲ್ಲಿ ಮರಗಳ ಕೆಳಗೆ ವಿಶ್ರಮಿಸುತ್ತದೆ. ಹುಲ್ಲು, ಬಿದರಿನ ಎಳೆಚಿಗುರು, ವಿವಿಧಬಗೆಯ ಎಲೆಗಳು ಇದರ ಮೆಚ್ಚಿನ ಆಹಾರ. ಮೇವನ್ನರಸಿಕೊಂಡು ಬೇರೆ ಬೇರೆ ಶ್ರಾಯಗಳಲ್ಲಿ ದೂರಪ್ರದೇಶಗಳಲ್ಲಿ ಅಲೆಯುವುದುಂಟು. ಆಗಿಂದಾಗ್ಗೆ 'ಉಪ್ಪು ನೆಕ್ಕಲು ಗಳಿಗೆ ಭೇಟಿಕೊಡುವುದೂ ಇದೆ.

	ಹುಲಿಯೇ ಇದರ ಪ್ರಧಾನ ಶತ್ರು. ಘ್ರಾಣ, ಶ್ರವಣ ಹಾಗೂ ದೃಷ್ಟಿ ಸಾಮಥ್ರ್ಯಗಳು ಚುರುಕಾಗಿವೆ. ಇದರ ಕೂಗು ಸಾಕುದನಗಳ ಕೂಗಿನಂತೆಯೇ ಇದೆ. ಗಂಡು ಹೆಣ್ಣುಗಳು ಕೂಡುವುದು ಸೆಪ್ಟಂಬರ್-ಅಕ್ಟೋಬರ್ ತಿಂಗಳುಗಳಲ್ಲಿ. ಸುಮಾರು 9 ತಿಂಗಳ ತರುವಾಯ ಸೂಲಿಗೆ ಒಂದು ಇಲ್ಲವೆ ಎರಡು ಮರಿಗಳು ಹುಟ್ಟುವುವು.
(ಬಿ.ಎಚ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ